ಇಸ್ಲಿಂಗ್‍ಟನ್ ಆಯೋಗ -
ವಿದ್ಯಾವಂತ ಭಾರತೀಯರನ್ನು ಉದ್ಯೋಗಗಳಿಗೆ ನೇಮಿಸುವ ವಿಷಯವಾಗಿ ಸಲಹೆ ನೀಡಲು 1912ರಲ್ಲಿ ನಿಯಮಿತವಾದ ಮಂಡಲಿ. ಲಾರ್ಡ್ ಇಸ್ಲಿಂಗ್‍ಟನ್. ಈ ಮಂಡಲಿಯ ಅಧ್ಯಕ್ಷ; ಲಾರ್ಡ್ (ಲಾರ್ಡ್ ಜೆಟ್‍ಲೆಂಡ್), ಸರ್ ವ್ಯಾಲನ್‍ಟೀನ್ ಪಿರಾಲ್, ರ್ಯಾಂಸೆಮ್ಯಾಕ್‍ಡೊನಾಲ್ಡ್, ಹರ್ಬರ್ಟ್ ಫಿಷರ್, ಗೋಪಾಲಕೃಷ್ಣ ಗೋಖಲೆ, ಸರ್ ಅಬ್ದುರ್ ರಹೀಂ ಮೊದಲಾದ ಪ್ರಮುಖರು ಸದಸ್ಯರು. ಈ ಮಂಡಲಿ ವರದಿಯನ್ನು ಸಿದ್ಧಪಡಿಸುವ ಕಾಲಕ್ಕೆ 1914ರಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾದ್ದರಿಂದ ಅದನ್ನು 1917ರಲ್ಲಿ ಪ್ರಸಿದ್ಧಪಡಿಸಬೇಕಾಯಿತು. ಲಂಡನ್ನಿನಲ್ಲಿ ನಡೆಯುವ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸ್ಪರ್ಧಿಸಲು ವಿದ್ಯಾವಂತ ಭಾರತೀಯ ತರುಣರಿಗೆ ಅವಕಾಶ ನೀಡಬೇಕು; ಅಲ್ಲದೆ ಶೇಕಡಾ 25 ಹುದ್ದೆಗಳು ಭಾರತೀಯರಿಗೆಂದೇ ಮೀಸಲಾಗಿರತಕ್ಕದ್ದು; ನೇಮಕ ಮಾತ್ರ ನೇರವಾಗೂ ಬಡ್ತಿ ಮೂಲಕವೂ ನಡೆಯತಕ್ಕದ್ದು, ಸೈನ್ಯೇತರ ಇಲಾಖೆಗಳಿಗೆ ಅಧಿಕಾರಿಗಳನ್ನು ಆರಿಸಲು ಇಂಗ್ಲೆಂಡಿನಲ್ಲಲ್ಲದೆ ಭಾರತದಲ್ಲೂ ಸಿವಿಲ್ ಸರ್ವಿಸ್ (ಲೋಕಸೇವಾ) ಸ್ಪರ್ಧಾಪರೀಕ್ಷೆ ನಡೆಸಬೇಕು-ಎಂಬುವುದು ಈ ಸಮಿತಿಯ ಕೆಲವು ಮುಖ್ಯ ಸಲಹೆಗಳು. ಅಂತೂ ಸುಮಾರು ಅರ್ಧ ಶತಮಾನದಿಂದಲೂ ಭಾರತೀಯರು ನಡೆಸುತ್ತಿದ್ದ ಚಳವಳಿಗೆ ಇದರಿಂದ ಸ್ವಲ್ಪ ಸಮಾಧಾನ ಸಿಕ್ಕಂತಾಯಿತು. ಆದರೆ ಅತಿ ಮುಖ್ಯ ಹುದ್ದೆಗಳಿಗೆ ಬ್ರಿಟಿಷರನ್ನೇ ನೇಮಿಸುವ ಕೆಲಸ ನಿರಾತಂಕವಾಗಿ ಮುಂದುವರಿದಿತ್ತು. ಈ ಸೇವಾವ್ಯವಸ್ಥೆಯ ಬ್ರಿಟಿಷ್ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗಿಂತ ಮೇಲು ಎಂಬ ಭಾವನೆ ಅಳಿಯಲಿಲ್ಲ. ಇದರಿಂದ ಭಾರತೀಯರಲ್ಲಿನ ಅಸಂತೃಪ್ತಿ ಕಡಿಮೆಯಾಗಲಿಲ್ಲ, ಪರಿಸ್ಥಿತಿ ಸ್ವಲ್ಪ ಸುಧಾರಿಸಬೇಕಾದರೆ ಮಾಂಟೆಗೂ ಚೆಮ್ಸಫರ್ಡ್ ವರದಿ ಬರಬೇಕಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ